ಯಾರೂ ಸಂಗಡ ಬಾಹೋರಿಲ್ಲ
ರಾಗ: ಮೋಹನ,        ತಾಳ: ಅಟ್ಟ,
ಯಾರೂ ಸಂಗಡ ಬಾಹೋರಿಲ್ಲ
ನಾರಾಯಣ ನಿಮ್ಮ ನಾಮ ಒಂದಲ್ಲದೆ           ||ಪ||

ಹೊತ್ತು ನವಮಾಸ ಪರಿಯಂತರವು ಗರ್ಭದಲಿ
ಹೆತ್ತು ಬಲು ನೋವು ಬೇನೆಗಳಿಂದಲಿ
ತುತ್ತು ಬುತ್ತಿಯ ಕೊಟ್ಟು ಸಲಹಿದಂಥ ತಾಯಿ
ಅತ್ತು ಕಳುಹುವಳಲ್ಲದೆ ನೆರೆ ಬಾಹಳೆ                  || ೧||

ದೇವವಿಪ್ರರು ಅಗ್ನಿ ಸಾಕ್ಷಿಯಿಂದಲಿ ತನ್ನ
ಭಾವಶುದ್ಧಿಯಲಿ ಧಾರೆಯೆರೆಸಿಕೊಂಡ
ದೇವಿ ತನ್ನ ತಲೆಗೆ ಕೈಯಿಟ್ಟುಕೊಂಡು 
ಇನ್ನಾವ ಗತಿಯಿಂದೆನುತ ಗೋಳಿಡುವಳಲ್ಲದೆ           ||೨||

ಮತ್ತೆ ಪ್ರಾಣನು ತನುವ ಬಿಟ್ಟು ಹೋಗುವಾಗ
ಎತ್ತಿವನ ಹೊರಗೊಯ್ದು ಹಾಕೆಂಬರು
ಎತ್ತಿದ ಕಸಕ್ಕಿಂತ ಕಡೆಯಾಯಿತೀ ದೇಹ
ವಿತ್ತವೆಷ್ಟಿದ್ದರೂ ಫಲವಿಲ್ಲ ಹರಿಯೆ                      ||೩||

ಪುತ್ರ ಮಿತ್ರರು ಸಕಲ ಬಂಧು ಬಳಗಗಳೆಲ್ಲ
ಹತ್ತಿರ ನಿಂತು ನೋಡುವರಲ್ಲದೆ
ಮೃತ್ಯುದೇವಿಯು ಬಂದು ಅಸುಗಳನು ಸೆಳೆವಾಗ
ಮತ್ತೆ ತನ್ನವರಿದ್ದು ಏನು ಮಾಡುವರು                    ||೪||

ಯಮನು ದೂತರು ಬಂದು ಪಾಶಂಗಳನೆ ಎಸೆದು
ಮಮತೆಯಿಲ್ಲದೆ ಪ್ರಾಣ ಎಳೆಯುತಿರಲು
ವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗ
ಕಮಲಾಕ್ಷ ಪುರಂದರವಿಠಲ ನೀನಲ್ಲದೆ                 ||೫|| ದಾಸವಾಣಿ
ರಚನೆ- ಪುರಂದರದಾಸರು.                    

ನೋಡಿ
ಪುರಂದರದಾಸರ ಸಾಹಿತ್ಯ
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರಂದರದಾಸರು
ಪರಿವಿಡಿ

ಉಲ್ಲೇಖ